ಆಯುರ್ವೇದವು ಮೊಸರನ್ನು ಶುಕ್ರ ಧಾತು ಬಲಪಡಿಸಲು ಮತ್ತು ದೇಹದ ತೂಕವನ್ನು ಹೆಚ್ಚಿಸಲು ಶಿಫಾರಸು ಮಾಡುತ್ತದೆ. ಇದು ಸಿಸ್ಟೈಟಿಸ್ (ಮೂತ್ರಕೋಶದ ಉರಿಯೂತ ) ಮತ್ತು ಯು ಟಿ ಐ (UTI ಮೂತ್ರನಾಳದ ಸೋಂಕು ) ಗೆ ಸಹ ಸಹಾಯ ಮಾಡುತ್ತದೆ. ಇದು ಕೆಲವರಲ್ಲಿ ಮಲಬದ್ಧತೆಗೆ ಕಾರಣವಾಗಬಹುದು.
ವಿಷಯ ಸೂಚಿ
ಮೊಸರು ಮತ್ತು ಯೋಗರ್ಟ್ ನಡುವಿನ ವ್ಯತ್ಯಾಸ
ಆಯುರ್ವೇದದಲ್ಲಿ ಹೇಳಿರುವಂತಹ ಮೊಸರಿನ ಆರೋಗ್ಯ ಪ್ರಯೋಜನಗಳು
ಮೊಸರನ್ನು ಯಾರು ಆಹಾರವಾಗಿ ಬಳಸಬೇಕು
ಮೊಸರನ್ನು ಯಾರು ಆಹಾರವಾಗಿ ಬಳಸಬಾರದು
ರಾತ್ರಿ ಹೊತ್ತು ಮೊಸರು ತಿನ್ನುವುದರಿಂದ ಉಂಟಾಗುವ ತೊಂದರೆಗಳು.
ಪಾಶ್ಚಾತ್ಯರ ಯೋಗರ್ಟ್ ಹಾಗು ಭಾರತೀಯ ಮೊಸರು ಇವೆರಡರ ಪ್ರಯೋಜನಗಳನ್ನು ಆಯುರ್ವೇದ ಪ್ರಕಾರ ಇಲ್ಲಿ ವಿವರಿಸಲಾಗುತ್ತದೆ . ಇವೆರಡನ್ನೂ ಅನೇಕ ಆರೋಗ್ಯ ಪರಿಸ್ಥಿತಿಗಳಿಗೆ ಪರಿಣಾಮಕಾರಿ ಮನೆಮದ್ದಾಗಿ ಬಳಸಬಹುದು.
ಪಾಶ್ಚಾತ್ಯರ ಯೋಗರ್ಟ್ ಹಾಗು ಭಾರತೀಯ ಮೊಸರು ಇವೆರಡರ ನಡುವಿನ ವ್ಯತ್ಯಾಸ
ಮೊಸರಿನ ಹಾಗು ಯೋಗರ್ಟ್ ತಯಾರಿಕೆಯ ವಿಧಾನ ಕ್ರಿ.ಪೂ 500 ರ ಹಿಂದೆಯೇ ತಿಳಿದಿತ್ತು .
ಮೊಸರು
ಇದು ಕರ್ಡ್ಲಿಂಗ್ ಪ್ರಕ್ರಿಯೆಯಿಂದ ಪಡೆದ ಡೈರಿ ಉತ್ಪನ್ನವಾಗಿದೆ. ಮೊದಲ ಹಾಲನ್ನು (milk ) ಪಾಶ್ಚರೀಕರಿಸಲಾಗುತ್ತದೆ ಮತ್ತು ತಣ್ಣಗಾಗಲು ಬಿಡಲಾಗುತ್ತದೆ. ತಾಪಮಾನವು 30 ರಿಂದ 40 ಡಿಗ್ರಿ ಸಿಲ್ಸಿಯಸ್‌ಗೆ ಬಂದಾಗ , ಅಗತ್ಯವಾದಷ್ಟು ಮೊಸರನ್ನು ಸೇರಿಸಿ ಚೆನ್ನಾಗಿ ಬೆರೆಸಿ, 8 ರಿಂದ 12 ಗಂಟೆಗಳ ಕಾಲ ತಂಗಿಸಲಾಗುತ್ತದೆ . ಇದರ ನಂತರ ಮೊಸರು ಬಳಸಲು ಸಿದ್ಧವಾಗುತ್ತದೆ . ಭಾರತೀಯ ಮೊಸರು “ಲ್ಯಾಕ್ಟೋಬಾಸಿಲಸ್” ಅಥವಾ ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಮೊಸರಿನ ರುಚಿ ಶೇಖರಣಾ ತಾಪಮಾನವನ್ನು ಅವಲಂಬಿಸಿ ಸಿಹಿಯಿಂದ ಹುಳಿ ರುಚಿಗೆ ಬದಲಾಗುತ್ತದೆ.
ಯೋಗರ್ಟ್
ಯೋಗರ್ಟ್ ಸಹ ಡೈರಿ ಉತ್ಪನ್ನವಾಗಿದ್ದು, ಅನ್ಯ ಪದ್ಧತಿ ಬಳಸಿಕೊಂಡು ಹಾಲನ್ನು ಹುದುಗಿಸುವ ಮೂಲಕ ತಯಾರಿಸಲಾಗುತ್ತದೆ. ಯೋಗರ್ಟ್ ಮಾಡುವಾಗ ಹಾಲಿಗೆ ಲ್ಯಾಕ್ಟೋಬಾಸಿಲಸ್ ಬಲ್ಗ್ಯಾರಿಸ್ ಮತ್ತು ಸ್ಟ್ರೆಪ್ಟೋಕೊಕಸ್ ಥರ್ಮೋಫಿಲಸ್ ಎಂಬ ಬ್ಯಾಕ್ಟೀರಿಯಾಗಳನ್ನು ಸೇರಿಸಿ ಸಂಸ್ಕರಿಸಲಾಗುತ್ತದೆ . ಯೋಗರ್ಟ್ ಏಕರೂಪವಾದ ರಚನೆ ಹೊಂದಿರುತ್ತದೆ .
ಮೊಸರಿನ ಆರೋಗ್ಯ ಪ್ರಯೋಜನಗಳು – ಆಯುರ್ವೇದದ ಪ್ರಕಾರ
ಆಯುರ್ವೇದದ ಪಠ್ಯಗಳು ಮೊಸರಿನ ಆರೋಗ್ಯ ಪ್ರಯೋಜನಗಳನ್ನು ಕೆಳಕಂಡಂತೆ ವಿವರಿಸುತ್ತವೆ .
ಆಯುರ್ವೇದ ತತ್ವಗಳ ಆಧಾರದ ಮೇಲೆ ಮೊಸರು ರುಚಿಗೆ ಹುಳಿ (ಆಮ್ಲ ರಸ) ಇದ್ದು , ಜೀರ್ಣಕ್ರಿಯೆಯ ನಂತರವೂ ಹುಳಿ ರುಚಿ ಇರುತ್ತದೆ . ಇದು ಕರುಳಿನಲ್ಲಿ ಹೋದಾಗ ನೀರನ್ನು ಉತ್ತಮವಾಗಿ ಹೀರಿಕೊಳ್ಳುತ್ತದೆ (ಗ್ರಾಹಿ ). ಈ ಗುಣದಿಂದ ಇದನ್ನು ಅತಿಸಾರ ಮತ್ತು ಭೇದಿಗಳಿಗೆ ಚಿಕಿತ್ಸೆ ನೀಡಲು ವ್ಯಾಪಕವಾಗಿ ಬಳಸಲಾಗುತ್ತದೆ . ಇದು ಜೀರ್ಣಿಸಿಕೊಳ್ಳಲು ಭಾರವಾಗಿರುತ್ತದೆ (ಗುರು) ಮತ್ತು ಅಧಿಕವಾಗಿ ಬಳಸಿದಾಗ ಹೊಟ್ಟೆ ಭಾರವನ್ನು ಉಂಟುಮಾಡುತ್ತದೆ ಮತ್ತು ಹಲವರಲ್ಲಿ ಮಲಬದ್ಧತೆಗೆ ಕಾರಣವಾಗಬಹುದು. ಇದು ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತದೆ (ಉಷ್ಣ ವೀರ್ಯ ). ಇದು ವಾತ ದೋಷವನ್ನು ಸಮತೋಲನಗೊಳಿಸುತ್ತದೆ ಮತ್ತು ಕಫ ದೋಷವನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿ ಕೊಬ್ಬನ್ನು ಹೆಚ್ಚಿಸುತ್ತದೆ . ಶುಕ್ರ ಧಾತು , ಹಸಿವು ಮತ್ತು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ.
ಮಹಿಳೆಯರ ಆರೋಗ್ಯಕ್ಕೆ ಮೊಸರು
ಸಿಸ್ಟೈಟಿಸ್ ಮತ್ತು ಯುಟಿಐ (Cystitis and UTI) ಮಹಿಳೆಯರಲ್ಲಿ ಬಹಳ ಸಾಮಾನ್ಯವಾಗಿದೆ. ಸಿಸ್ಟೈಟಿಸ್ ಮತ್ತು ಯುಟಿಐನಲ್ಲಿ ಮೊಸರು ತುಂಬಾ ಉಪಯುಕ್ತವಾಗಿದೆ. ಇದು ಮೂತ್ರಕೋಶದ ಒಳ ಪದರಗಳ ಉರಿಯೂತವನ್ನು ಶಮನಗೊಳಿಸುತ್ತದೆ ಮತ್ತು ಮೂತ್ರ ವಿಸರ್ಜನೆಯನ್ನು ಸರಾಗಗೊಳಿಸುತ್ತದೆ. ಸಣ್ಣಗಿರುವ ಮತ್ತು ತೂಕ ಹೆಚ್ಚಿಸಲು ಬಯಸುವ ಮಹಿಳೆಯರು ಇದನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಈ ಡೈರಿ ಉತ್ಪನ್ನವು ಉತ್ತಮ ಬ್ಯಾಕ್ಟೀರಿಯಾವನ್ನು ಹೊಂದಿದ್ದು, ಇದು ಯೋನಿಯ ಆರೋಗ್ಯಕರ PH ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಪುರುಷರಿಗೆ ಮೊಸರಿನ ಪ್ರಯೋಜನಗಳು
ಇದು ಅತ್ಯುತ್ತಮ ವಾಜಿಕರಣ ಆಹಾರ (ಕಾಮೋತ್ತೇಜಕ ಮತ್ತು ಲೈಂಗಿಕ ಶಕ್ತಿ ಹೆಚ್ಚಿಸುತ್ತದೆ ). ವೀರ್ಯಾಣುಗಳ ಸಂಖ್ಯೆ ಮತ್ತು ಚಲನಶೀಲತೆಯನ್ನು ಸುಧಾರಿಸುತ್ತದೆ . ನಿಮಿರು ದೌರ್ಬಲ್ಯವನ್ನು ಹಾಗು ಶೀಘ್ರ ಸ್ಖಲನವನ್ನು (ಇಡಿ ಮತ್ತು ಪಿಇ) ಸರಿಪಡಿಸಲು ಸಹಾಯ ಮಾಡುತ್ತದೆ. ಇದು ಪುರುಷರ ಫಲವತ್ತತೆಯನ್ನು ಹೆಚ್ಚಿಸುತ್ತದೆ.
ಕೂದಲಿನ ಆರೋಗ್ಯಕ್ಕೆ ಮೊಸರು
ತಲೆಹೊಟ್ಟು ( dandruff ) ಕೂದಲು ಉದುರುವಿಕೆಗೆ ಕಾರಣವಾಗಿದೆ. ಹುಳಿ ಮೊಸರನ್ನು ನೆತ್ತಿ ಮತ್ತು ಕೂದಲಿಗೆ ಹೇರ್ ಪ್ಯಾಕ್ (hair Pack )ಆಗಿ ವಾರಕ್ಕೊಮ್ಮೆ ಹಾಕಿಕೊಳ್ಳುವುದರಿಂದ ತಲೆಹೊಟ್ಟು ಉಂಟಾಗುವುದನ್ನು ತಡೆಯುತ್ತದೆ. ಇದರ ಔಷಧೀಯ ತತ್ವಗಳನ್ನು ಹೆಚ್ಚಿಸಲು ನೀವು ನೆನೆಸಿದ ಮೆಂತ್ಯ ಬೀಜಗಳ ಪೇಸ್ಟ್ ಅಥವಾ ಬೇವಿನ ಎಲೆಯ (Neem ) ರಸವನ್ನು ಬೆರೆಸಬಹುದು. ಈ ಹೇರ್ ಪ್ಯಾಕ್ ನೆತ್ತಿಯನ್ನು ಪೋಷಿಸುವುದಲ್ಲದೆ ಕಂಡಿಷನರ್ ಆಗಿ ಕಾರ್ಯನಿರ್ವಹಿಸುತ್ತದೆ.
ಹೆಸರುಬೇಳೆಯ ಪುಡಿಯನ್ನು ಮೊಸರಿನೊಂದಿಗೆ ನೆನೆಸಿ ನೆತ್ತಿಗೆ ಮಸಾಜ್ ಮಾಡಿ ಕೂದಲಿಗೆ ಹಚ್ಚಿ . 1 ಗಂಟೆಯ ನಂತರ ಅದನ್ನು ತೊಳೆಯಿರಿ. ಕೂದಲು ಉದುರುವುದು ಮತ್ತು ತಲೆಹೊಟ್ಟು ತಡೆಯಲು ಇದು ಸಹಾಯ ಮಾಡುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲೂ ಸಹ ಸಹಾಯ ಮಾಡುತ್ತದೆ.
ಚರ್ಮದ ಕಾಂತಿಗೆ ಮೊಸರನ್ನು ಉಪಯೊಗಿಸುವುದು ಹೇಗೆ ?
ಬೇಸಿಗೆಯಲ್ಲಿ ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ. ಈ ಪುಡಿಯನ್ನು ಸ್ವಲ್ಪ ಮೊಸರಿನೊಂದಿಗೆ ಬೆರೆಸಿ ಮುಖ ಮತ್ತು ಕುತ್ತಿಗೆಗೆ ಮಸಾಜ್ ಮಾಡಿ. ಇದು ಅತ್ಯುತ್ತಮವಾದ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮುಚ್ಚಿಹೋಗಿರುವ ರಂಧ್ರಗಳನ್ನು ಶುದ್ಧೀಕರಿಸುತ್ತದೆ. ಇದು ಮೊಡವೆ ಮತ್ತು ಗುಳ್ಳೆಗಳು ( acne and Pimple) ಮೂಡುವುದನ್ನು ತಡೆಯುತ್ತದೆ . ಮುಖದ ಚರ್ಮ ಮತ್ತು ದೇಹದ ಚರ್ಮವನ್ನು ಪುನಶ್ಚೇತನಗೊಳಿಸಲು ಕಡಲೇ ಹಿಟ್ಟು ಮತ್ತು ಮೊಸರಿನ ಮಿಶ್ರಣವು ಅತ್ಯುತ್ತಮವಾದ ಪ್ಯಾಕ್ (face Pack ) ಆಗಿದೆ. ಮೊಸರನ್ನು ಮುಖಕ್ಕೆ ಹಚ್ಚುವುದರಿಂದ ಶುಷ್ಕತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಮುಖವನ್ನು ಶುದ್ಧಗೊಳಿಸುತ್ತದೆ.
ಮೊಸರನ್ನು ಯಾರು ಆಹಾರವಾಗಿ ಬಳಸಬೇಕು ?
ಮೊಸರನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಸಾಮಾನ್ಯ ಶೀತ, ಅತಿಸಾರ, ಭೇದಿ, ಶೀತ ಜ್ವರ, ಮಲೇರಿಯಾ, ಹಸಿವಾಗದಿರುವುದು , ಸಿಸ್ಟೈಟಿಸ್ ಮತ್ತು ಯುಟಿಐನಲ್ಲಿ ಮೊಸರನ್ನು ಶಿಫಾರಸು ಮಾಡಲಾಗುತ್ತದೆ. ತೂಕ ಹೆಚ್ಚಿಸಲು ಬಯಸುವ ವ್ಯಕ್ತಿಗಳು ( weight Gain ) ಇದನ್ನು ಬಳಸಬಹುದು. ಇದು ನಾಲಗೆಯ ರುಚಿ ಮೊಗ್ಗುಗಳನ್ನು ಉತ್ತೇಜಿಸುತ್ತದೆ ಮತ್ತು ಹಸಿವನ್ನುಂಟು ಮಾಡುತ್ತದೆ. ಇದನ್ನು ಹೊಟ್ಟೆಯಲ್ಲಿ ಹುಣ್ಣು ಇರುವಾಗ ಆಹಾರವಾಗಿ ಬಳಸಬಹುದು . ಮೊಸರಿನಲ್ಲಿರುವ ಕರುಳಿನ ಸ್ನೇಹಿ ಬ್ಯಾಕ್ಟೀರಿಯಾವು ಕರುಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದ್ದು ಮೂಳೆಗಳ ( asthi dhatu ) ನಿರ್ಮಾಣ ಮತ್ತು ದುರಸ್ತಿಗೆ ಸಹಾಯ ಮಾಡುತ್ತದೆ. ಆದ್ದರಿಂದ ಮಕ್ಕಳು ಮತ್ತು ಮಹಿಳೆಯರು ಮೊಸರನ್ನು ನಿಯಮಿತವಾಗಿ ಸೇವಿಸುವಂತೆ ಸೂಚಿಸಲಾಗಿದೆ.
ಮೊಸರನ್ನು ಯಾರು ಆಹಾರವಾಗಿ ಬಳಸಬಾರದು ?
ರಕ್ತ ಧಾತು ಮತ್ತು ಪಿತ್ತ ದೋಷದ (pitta dosha ) ಅಸುಂತಲನೆಯಿಂದ ಉಂಟಾಗುವ ಖಾಯಿಲೆಗಳನ್ನು ಹೊಂದಿರುವ ವ್ಯಕ್ತಿಗಳು ತಮ್ಮ ಆಹಾರದಲ್ಲಿ ಮೊಸರು ಬೇಡ ಎಂದು ಹೇಳಬೇಕು. ರಕ್ತವು ದೋಷಗಳಿಂದ ಕೆಟ್ಟಿದ್ದರಅಂತಹ ರೋಗಗಳಲ್ಲಿ ಮೊಸರು ಬಳಸಬಾರದು. ಸ್ಥೂಲಕಾಯದ ಜನರು ( obesity ) ಮತ್ತು ತೂಕ ಇಳಿಸಿಕೊಳ್ಳಲು ಬಯಸುವ ವ್ಯಕ್ತಿಗಳು ಇದನ್ನು ತಮ್ಮ ಆಹಾರದಲ್ಲಿ ಬಳಸಬಾರದು. ಇದನ್ನು ಶುದ್ಧ ರೂಪದಲ್ಲಿ ನಿಯಮಿತವಾಗಿ ಸೇವಿಸುವುದರಿಂದ ದೇಹದ ಕೊಬ್ಬು ( cholestrol ) ಹೆಚ್ಚಾಗುತ್ತದೆ ಮತ್ತು ಬೊಜ್ಜು ಉಂಟಾಗಬಹುದು.
ರಾತ್ರಿ ಸಮಯದಲ್ಲಿ ಮೊಸರು ಬಳಸಬಹುದೇ?
ಆಯುರ್ವೇದದ ಪಠ್ಯಗಳು ರಾತ್ರಿಯಲ್ಲಿ ಮೊಸರು ಬಳಸದಿರಲು ಒತ್ತು ನೀಡುತ್ತವೆ. ಇದು ಜೀರ್ಣಿಸಿಕೊಳ್ಳಲು ಭಾರವಾಗಿರುತ್ತದೆ ಮತ್ತು ರುಚಿಯಲ್ಲಿ ಹುಳಿಯಾಗುತ್ತದೆ, ರಾತ್ರಿಯಲ್ಲಿ ಜೀರ್ಣಕ್ರಿಯೆಯ ಸಮಯದಲ್ಲಿ ಇದು ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಸಮಸ್ಯೆಗಳು ರಾತ್ರಿ ನಿದ್ರೆಗೆ ಭಂಗ ತರುತ್ತವೆ ಮತ್ತು ಆರೋಗ್ಯಕ್ಕೆ ಹಾನಿಕಾರಕವಾದ ಆಮ ಎಂಬ ವಿಷ ಬಿಡುಗಡೆಯಾಗುತ್ತದೆ. ಆದ್ದರಿಂದ ರಾತ್ರಿಯಲ್ಲಿ ಮೊಸರು ತಿನ್ನುವುದನ್ನು ನಿಲ್ಲಿಸಬೇಕು .
ಮೊಸರನ್ನು ಉಪಯೋಗಿಸುವಾಗ ಪಾಲಿಸಬೇಕಾದ ನಿಯಮಗಳು
- ಮೊಸರನ್ನು ರಾತ್ರಿಯಲ್ಲಿ ತಿನ್ನಬಾರದು.
- ಮೊಸರನ್ನು ಕುದಿಸಬಾರದು ಅಥವಾ ಬಿಸಿ ಮಾಡಬಾರದು.
- ಯಾವಾಗಲೂ ಇದನ್ನು ಸೇವಿಸುವ ಮೊದಲು ಜೇನುತುಪ್ಪ ( honey ) ಅಥವಾ ಸಕ್ಕರೆ ಅಥವಾ ಬೆಲ್ಲದೊಂದಿಗೆ ( Jaggery ) ಬೆರೆಸಬೇಕು.
- ಬೇಯಿಸಿದ ಹೆಸರುಕಾಳು ಅಥವಾ ಹೆಸರು ಬೇಳೆ ಅಥವಾ ತುಪ್ಪ ಅಥವಾ ಬೆಟ್ಟದ ನೆಲ್ಲಿಕಾಯಿ (ಆಮ್ಲಾ, amla) ಇವನ್ನು ಮೊಸರಿನೊಂದಿಗೆ ಬೆರೆಸಿದಾಗ ಇವುಗಳ ಔಷಧೀಯ ಗುಣಗಳು ಹೆಚ್ಚುತ್ತವೆ .
- ಸಂಪೂರ್ಣವಾಗಿ ಹೆಪ್ಪುಗಟ್ಟಿದ ಮೊಸರನ್ನು ಬಳಸಬೇಕು.
- ಅಪೂರ್ಣವಾಗಿ ಹೆಪ್ಪುಗಟ್ಟಿದ ಮೊಸರಿನ ಸೇವನೆಯು ಸರ್ಪಸುತ್ತು ( ಹರ್ಪಿಸ್ herpes ) , ಸೋರಿಯಾಸಿಸ್ (psoriasis ) ,
- ಮೂಲವ್ಯಾ ಧಿ ( piles ), ಕರುಳಿನ ಉರಿಯೂತ ( ಐಬಿಎಸ್ IBS ) ಇತ್ಯಾದಿಗಳಲ್ಲಿ ತೊಂದರೆಯಾಗಬಹುದು .
ಲೇಖಕಿ : ಡಾ.ಸವಿತಾ ಸೂರಿ, ಸಲಹೆಗಾರ ಆಯುರ್ವೇದ ವೈದ್ಯೆ
+91 9945995660 / +91 9448433911 ಗೆ ಕರೆ ಮಾಡಿ
ವಾಟ್ಸ್ ಅಪ್ + 91 6360108663 /